#mathrusevasankalpa #scooteryatri #krishnakumar
ಮೈಸೂರಿನ ನಿವಾಸಿಯಾದ ಶ್ರೀ ಕೃಷ್ಣಕುಮಾರ ದಕ್ಷಿಣಾಮೂರ್ತಿ ಅವರು 'ಆಧುನಿಕ ಶ್ರವಣಕುಮಾರ' ಎಂದು ಖ್ಯಾತರಾದವರು.
ಸೆಪ್ಟೆಂಬರ್ 13, 2021 ರಂದು, ಮೈಸೂರಿನ ರೂಪಾನಗರದಲ್ಲಿರುವ ವರಸಿದ್ಧಿವಿನಾಯಕ ದೇವಸ್ಥಾನದಲ್ಲಿ ಅನಿರೀಕ್ಷಿತವಾಗಿ ಶ್ರೀ ಕೃಷ್ಣಕುಮಾರ್ ದಕ್ಷಿಣಾಮೂರ್ತಿ ಹಾಗೂ ಅವರ ತಾಯಿ ಶ್ರೀಮತಿ ಚೂಡಾರತ್ನ ಅವರನ್ನು ಭೇಟಿಯಾಗುವ ಸದವಕಾಶ ಲಭಿಸಿತು.
ಕೆಲವು ತಿಂಗಳುಗಳ ಹಿಂದೆ, ದೇಶದಾದ್ಯಂತ ಟಿವಿ ವಾಹಿನಿಗಳಲ್ಲಿ ಹಾಗೂ ಪತ್ರಿಕೆಗಳಲ್ಲಿ 'ಆಧುನಿಕ ಶ್ರವಣಕುಮಾರ' ಎಂದು ಖ್ಯಾತರಾದ ಕೃಷ್ಣಕುಮಾರ್ ಅವರ ಬಗ್ಗೆ ಸುದ್ದಿ ವರದಿಯಾಗಿತ್ತು. ೪೦ ವರ್ಷದ ಕೃಷ್ಣಕುಮಾರ್ ಅವರು ತಮ್ಮ ೭೦ ರ ವಯಸ್ಸಿನ ತಮ್ಮ ತಾಯಿಯಾದ ಚೂಡಾರತ್ನ ಅವರನ್ನು, ಬಜಾಜ್ ಚೇತಕ್ ಸ್ಕೂಟರಿನಲ್ಲಿ ಕೂರಿಸಿಕೊಂಡು ಭಾರತ, ನೇಪಾಳ, ಭೂತಾನ್ ಹಾಗೂ ಮಾಯ್ ನ್ಮಾರ್ ಗಳಲ್ಲಿರುವ ಸಾವಿರಾರು ತೀರ್ಥಕ್ಷೇತ್ರಗಳಿಗೆ ಭೇಟಿಕೊಟ್ಟ ಯಶೋಗಾಥೆ ಅಪ್ರತಿಮವಾದುದು. ತಮ್ಮ ಈ ಅಭಿಯಾನಕ್ಕೆ ಅವರು 'ಮಾತೃಸೇವಾ ಸಂಕಲ್ಪ ಯಾತ್ರೆ' ಎಂದು ಹೆಸರಿಟ್ಟಿದ್ದಾರೆ, ಈ ಬಗ್ಗೆ ಫೇಸ್ ಬುಕ್ ನಲ್ಲಿ ಪುಟವಿದೆ. ಹೆಚ್ಚಿನ ವಿವರಗಳನ್ನು ಅಲ್ಲಿ ಪಡೆಯಬಹುದು.
ಈ ಯಾತ್ರೆಯ ಅವಧಿ : ಎರಡೂವರೆ ವರ್ಷ ( 16/01/2018- 16/09/2020)
ಕ್ರಮಿಸಿದ ದೂರ : ಅಂದಾಜು 56000 ಕಿ.ಮೀ
ಪ್ರಯಾಣಕ್ಕೆ ಖರ್ಚು-ವೆಚ್ಚ : ದಿನಕ್ಕೆ ಸರಾಸರಿ ಆರು ಗಂಟೆ ಪ್ರಯಾಣಿಸುವುದು, ರಾತ್ರಿ ವಿಶ್ರಾಂತಿ. ಸರಳ ಜೀವನ ಶೈಲಿ. ಸ್ಕೂಟರ್ ನಲ್ಲಿ ಒಯ್ಯಬಹುದಾದಷ್ಟು ಲಗೇಜು ಮಾತ್ರ ಬಳಸಿದ್ದರು. ತನ್ನದೇ ದುಡಿಮೆಯ ಉಳಿತಾಯ, ಲಭ್ಯವಿರುವೆಡೆಯಲ್ಲಿ ದೇವಸ್ಥಾನ, ಆಶ್ರಮ, ಮಠ ಇತ್ಯಾದಿಗಳಲ್ಲಿ ಉಳಿದುಕೊಳ್ಳುವುದು.
ಗಳಿಸಿದ್ದು : ಹಲವಾರು ತೀರ್ಥಕ್ಷೇತ್ರಗಳ ದರ್ಶನದಿಂದ ತಾಯಿಗೆ ಸಿದ್ದಿಸಿದ ಧನ್ಯತೆ ಹಾಗೂ ಇದನ್ನು ನೋಡಿದ ಮಗನಿಗೆ ಸಾರ್ಥಕ ಭಾವ. ಪ್ರಯಾಣದುದ್ದಕ್ಕೂ, ದೇಶ-ವಿದೇಶಗಳ ಜನರು ತೋರಿಸಿದ ಪ್ರೀತಿ-ವಿಶ್ವಾಸ-ಗೌರವಕ್ಕೆ ಬೆಲೆಕಟ್ಟಲಾಗದು..